ಖುಷಿ ವಿಚಾರ : ಛತ್ತೀಸಗಢದ ಕಾಂಗರ್ ಕಣಿವ ರಾಷ್ಟ್ರೀಯ ಉದ್ಯಾನ, ತೆಲಂಗಾಣದ ಮುದುಮಲ್‌ನಲ್ಲಿ ಇರುವ ಶಿಲಾಯುಗದ ‘ಮೆನ್‌ಹಿರ್ಸ್’ ಸೇರಿದಂತೆ ಆರು ಸ್ಥಳಗಳು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಭಾರತದ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
ಇದರಿಂದ ಯುನೇಸ್ಕೋ ಪಟ್ಟಿಗೆ ಸೇರಿದ ಭಾರತದ ಒಟ್ಟು ತಾಣಗಳ ಸಂಖ್ಯೆ 62 ಕ್ಕೆ ಏರಿದೆ. ಈ ಸ್ಥಳಗಳನ್ನು ಮಾರ್ಚ್ 7ರಂದು ಸಂಭಾವ್ಯ ಪಟ್ಟಿಗೆ ಸೇರಿಸಲಾಗಿದೆ ಎಂದು ಯುನೆಸ್ಕೊದಲ್ಲಿನ ಭಾರತದ ಶಾಶ್ವತ ನಿಯೋಗವು ತಿಳಿಸಿದೆ. ತಾಣಗಳ ಸೇರ್ಪಡೆಯ ಮಾಹಿತಿಯನ್ನು ಯುನೇಸ್ಕೋ ನಿಯೋಗವು ಟ್ವಿಟರ್ (ಎಕ್ಸ್ ) ನಲ್ಲಿ ಹಂಚಿಕೊಂಡಿದೆ.
ಯಾವುವು ಆರು ತಾಣಗಳು ?
ಛತ್ತೀಸಗಢದ ಕಾಂಗರ್ ಕಣಿವ ರಾಷ್ಟ್ರೀಯ ಉದ್ಯಾನ,
ತೆಲಂಗಾಣದ ಮುದುಮಲ್‌ನಲ್ಲಿ ಇರುವ ಶಿಲಾಯುಗದ ‘ಮೆನ್‌ಹಿರ್ಸ್’,
ಮೌರ್ಯರು ಆಡಳಿತ ನಡೆಸಿದ ಪ್ರದೇಶಗಳುದ್ದಕ್ಕೂ ಕಂಡುಬಂದಿರುವ ಅಶೋಕನ ಶಾಸನಗಳಿರುವ ಸ್ಥಳಗಳು (ದೇಶದಲ್ಲಿ ಹರಡಿರುವ ಪ್ರಮುಖ ರಾಜ್ಯದ ಸ್ಥಳಗಳು),
‘ಚೌಸತ್ ಯೋಗಿನಿ’ ದೇಗುಲಗಳ ಸ್ಥಳಗಳು ,
ಉತ್ತರ ಭಾರತದಲ್ಲಿನ ಗುಪ್ತರ ಕಾಲದ ದೇಗುಲಗಳು
ಮತ್ತು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿನ ಬುಂದೇಲರ ಅರಮನೆ- ಕೋಟೆಗಳ ಸರಣಿಯು ತಾತ್ಕಾಲಿಕ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿವೆ ಎಂದು ನಿಯೋಗವು ಮಾಹಿತಿ ಹಂಚಿಕೊಂಡಿದೆ.